ಭಿಲ್ವಾರ
ರಾಜಸ್ಥಾನದ ಒಂದು ಜಿಲ್ಲೆ ಮತ್ತು ಜಿಲ್ಲಾ ಆಡಳಿತ ಕೇಂದ್ರ ನಗರ.  ರಾಜ್ಯದ ದಕ್ಷಿಣದಲ್ಲಿ ಉ.  ಅ.  25ಲಿ30′ ನಿಂದ 25ಲಿ27′ ಮತ್ತು ಪೂ, ರೇ.  74ಲಿ4′ ನಿಂದ 75ಲಿ30′ ನಡುವಿರುವ ಈ ಜಿಲ್ಲೆಯ ಉತ್ತರಕ್ಕೆ ಅಜ್ಮೀರ್, ಪೂರ್ವಕ್ಕೆ ಬೂಂದೀ, ದಕ್ಷಿಣಕ್ಕೆ ಚಿತ್ತೂರುಗಢ ಹಾಗೂ ಪಶ್ಚಿಮಕ್ಕೆ ಉದಯಪುರ ಜಿಲ್ಲೆಗಳಿವೆ.  ಜಿಲ್ಲಾ ವಿಸ್ತೀರ್ಣ 10,448 ಚ.  ಕಿಮೀ.  ಜನಸಂಖ್ಯೆ 1,310,379 (1981).

	ಜಿಲ್ಲೆ ಬಹುಭಾಗ ಬಂಡೆಗಲ್ಲುಗಳ ಬೆಟ್ಟಗಾಡುಪ್ರದೇಶ. ಬಯಲು ಪ್ರದೇಶದಲ್ಲಿ ವಿರಳವಾಗಿ ಮುಳ್ಳುಪೊದೆಗಳು ಮತ್ತು ಕುರುಚಲು ಗಿಡಗಳಿವೆ.  ವರ್ಷಕ್ಕೆ ಸುಮಾರು 50 ಸೆಂಮೀ ಮಳೆಯಾಗುತ್ತದೆ.  ಮಣ್ಣು ಕಪ್ಪು ಕೆಂಪುಮಿಶ್ರಿತ.  ಉಷ್ಣತೆ ಹೆಚ್ಚೆನ್ನಬಹುದಾದ ಈ ಪ್ರದೇಶದಲ್ಲಿ ಬಾವಿ, ಕೊಳವೆ ಬಾವಿ, ಕೆರೆ, ಕಾಲುವೆ ಹಾಗೂ ಇತರ ನೀರಾವರಿ ಸೌಕರ್ಯಗಳಿವೆ.  ಗೋದಿ, ಜೋಳ, ಬಾರ್ಲಿ, ಎಣ್ಣೆ ಬೀಜಗಳು, ಕಬ್ಬು, ದ್ವಿದಳಧಾನ್ಯಗಳು, ಬೇಳೆ ಕಾಳುಗಳು ಹಾಗೂ ಹತ್ತಿ ಮುಂತಾದವನ್ನು ಇಲ್ಲಿ ಬೆಳೆಸುತ್ತಾರೆ.  ಕಬ್ಬಿಣ ಮತ್ತು ತಾಮ್ರದ ಅದುರುಗಳು, ಮೇದಶಿಲೆ, ಬಳಪದಕಲ್ಲು ಹಾಗೂ ಬುಲ್ಕ್ ಖನಿಜ ಈ ಜಿಲ್ಲೆಯ ಕಮಲಪುರ, ಲಂಪಾ, ಫವಾರಿಯಾ ಮತ್ತು ಚಾಂದಪುರ ಎಂಬಲ್ಲಿ ಹೆಚ್ಚು ಸಿಗುವುವು.  ಅಭ್ರಕದ ಉತ್ಪಾದನೆಯಲ್ಲಿ ಬಿಹಾರವನ್ನು ಬಿಟ್ಟರೆ ರಾಜಸ್ಥಾನವೇ ಪ್ರಮುಖವಾದುದು. ಅದರಲ್ಲಿ ಅಧಿಕಾಂಶ ಈ ಜಿಲ್ಲೆಯದು, ನಟ-ಕಿ-ನೆರಿ, ಟೊಂಕಾ, ಸಿದಿರಿಯಾಲ್, ಚಾಪ್ರಿ, ರತನ್‍ಗಾಭ, ಮಾಂಕಿಯ ಬಂಜಾರಿ, ಪೊರ್ಖನ್, ದೆಹಲಿ, ಕೊಚರಿಯಾಘೊಗಸ್, ಗೋಕುಲಪುರ, ಧೌಮಂದ್ ಮುಂತಾದ ಕಡೆಗಳಲ್ಲಿ ಅಭ್ರಕದ ಗಣಿಗಳಿವೆ.  ಉಕ್ಕಿನ ಕಾರ್ಖಾನೆಗಳಲ್ಲಿ ಅಭ್ರಕವನ್ನು ಬಳಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು.

	ಜಿಲ್ಲೆಯ ಆಡಳಿತ ಕೇಂದ್ರ ಭಿಲ್ವಾರ, ಜೈಪುರಕ್ಕೆ ನೈಋತ್ಯದಲ್ಲಿ ಉ. ಅ. 25ಲಿ21′ ಮತ್ತು ಪೂ.  ರೇ.  74ಲಿ39′ ನಡುವೆ ಇದೆ.  ಈ ನಗರ ಅಜ್ಮೀರಕ್ಕೆ 133 ಕಿಮೀ ಉದಯಪುರಕ್ಕೆ 208 ಕಿಮೀ ಮತ್ತು ಚಿತ್ತೂರಿಗೆ 56 ಕಿಮೀ ಅಂತರದಲ್ಲಿ ಇದ್ದು ಇದೊಂದು ದೊಡ್ಡ ವ್ಯಾಪಾರ ವಾಣಿಜ್ಯ ಕೇಂದ್ರವಾಗಿದೆ.  ಜನಸಂಖ್ಯೆ 122,625 (1981). 

	ಇಲ್ಲಿ ತಯಾರಾಗುವ ತವರದ ಪಾತ್ರೆಗಳು ಪ್ರಸಿದ್ಧಿಯಾಗಿದ್ದು ವಿಶೇಷವಾಗಿ ರಫ್ತಾಗುತ್ತವೆ. ಹತ್ತಿ ಉದ್ಯಮವೂ ಇದೆ.  ಕೈಮಗ್ಗದ ಬಟ್ಟೆಗಳು ತಯಾರಾಗುತ್ತವೆ. ಅಭ್ರಕದ ಗಟ್ಟಿಗಳನ್ನು ತಯಾರಿಸುವ ಕಾರ್ಖಾನೆಯೊಂದಿದೆ.  ಹಿತ್ತಾಳೆ ಮತ್ತು ತಾಮ್ರದ ಕುಶಲ ಕೆಲಸಕ್ಕೆ ಇಲ್ಲಿಯ ಕೆಲಸಗಾರರು ಪ್ರಸಿದ್ಧರು.  ಭಿಲ್ವಾರದಲ್ಲಿ ಹಿಂದೆ ಒಂದು ಟಂಕಸಾಲೆ  ಇತ್ತು.  ಅದರಲ್ಲಿ ತಯಾರಾದ ಭಿಲಾರಿ ನಾಣ್ಯಗಳು ಮಾರ್‍ವಾಡಾ ಮತ್ತು ಸಿದೊಹಿ ರಿಯಾಸತ್ ಪ್ರದೇಶಗಳಲ್ಲಿ ಚಲಾವಣೆಯಲ್ಲಿ ಇದ್ದುವು.  ಭಿಲ್ವಾರ ಹಿಂದೆ ಉದಯಪುರ ಸಂಸ್ಥಾನಕ್ಕೆ ಸೇರಿತ್ತು.  1948 ರಿಂದ ರಾಜಸ್ಥಾನ ರಾಜ್ಯದ ಒಂದು ಭಾಗವಾಯಿತು.  ನಗರವನ್ನು ಭೀಲ್ವಾಡಾ ಎಂದೂ ಕರೆಯುವುದುಂಟು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ